ಶಿವಮೊಗ್ಗ: ನಗರದ ರೈಲ್ವೆ ಸ್ಟೇಷನ್‌ನ ಗೂಡ್ಸ್ ಶೆಡ್ ಬಳಿ ನಿಲ್ಲಿಸಲಾಗಿದ್ದ ಲಾರಿಯೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿದ್ದು, ಕ್ಷಣಾರ್ಧದಲ್ಲಿ ವಾಹನವು ಸುಟ್ಟು ಕರಕಲಾಗಿದೆ.


ಅಬಿದ್ ಎಂಬುವವರಿಗೆ ಸೇರಿದ ‘ಎಸ್ ಕೆ ಪಿ’ ಹೆಸರಿನ ಈ ಗೂಡ್ಸ್ ಲಾರಿಯು ರೈಲ್ವೆ ಮೂಲಕ ಬಂದಿದ್ದ ಗೊಬ್ಬರವನ್ನು ಸಾಗಿಸಲು ಸಜ್ಜಾಗಿ ನಿಂತಿತ್ತು. ಇಂದು ಮುಂಜಾನೆ ಸುಮಾರು 5 ಗಂಟೆಯ ಸುಮಾರಿಗೆ ಯಾರೂ ಇಲ್ಲದ ಸಮಯದಲ್ಲಿ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬೆಂಕಿಯು ಮೊದಲು ಲಾರಿಯ ಕ್ಯಾಬಿನ್ ಭಾಗದಲ್ಲಿ ಕಾಣಿಸಿಕೊಂಡಿದೆ. ಈ ವೇಳೆ ಅಲ್ಲೇ ಇದ್ದ ಕ್ಲೀನರ್ ಕೂಡಲೇ ಎಚ್ಚೆತ್ತುಕೊಂಡು ಮಾಲೀಕರಿಗೆ ವಿಷಯ ಮುಟ್ಟಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಶಾರ್ಟ್ ಸರ್ಕ್ಯೂಟ್‌ನಿಂದಲೇ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.